ಧರ್ಮಾಚರಣೆಯ ನ್ಯೂನತೆಗಳನ್ನು ತುಂಬಿಸುವ ಸಾಧನ
ಮಾನವನನ್ನು ನಿರ್ಮಿಸುವ ಮೊದಲೇ ಈಶ್ವರನು ಮಾನವನ ಆಚಾರ ಸಂಹಿತೆಯನ್ನು ತಯಾರಿಸಿದನು. ಅದನ್ನೇ ನಾವು ಅಪೌರುಷೇಯ ವೇದ ಎನ್ನುತ್ತೇವೆ. ವೇದಧರ್ಮವನ್ನು ವರ್ಣಾಶ್ರಮಕ್ಕನುಸಾರವಾಗಿ ಪಾಲಿಸಿದರೆ ಮಾನವನಿಗೆ, ಜನ್ಮದಿಂದ ಮೃತ್ಯುವಿನವರೆಗೆ ದುಃಖವಂತೂ ಆಗುವುದೇ ಇಲ್ಲ ಹಾಗೂ ಸುಖವು ಲಭಿಸುತ್ತದೆ. ಸುಖವು ಮಿಥ್ಯವೇ ಆಗಿದೆ ಆದರೂ ಅದು ಸಿಗಬೇಕೆನ್ನುವ ಅಪೇಕ್ಷೆಯು ಮಾನವನಿಗಿರುತ್ತದೆ. ಆದರೆ ಇಂತಹ ಮಿಥ್ಯಾ ಸುಖವನ್ನು ಪಡೆಯುತ್ತಾ ಪಡೆಯುತ್ತಾ ಆ ಸುಖದ ಬಗ್ಗೆ ವೈರಾಗ್ಯ ಬಂದು ಅವನು ಮೋಕ್ಷಕ್ಕೆ ಪಾತ್ರನಾಗಬೇಕು ಎನ್ನುವ ರೀತಿಯಲ್ಲಿ ಧರ್ಮದ ರಚನೆ ಮಾಡಲಾಗಿದೆ. ಅಂದರೆ ಐಹಿಕ ಸುಖ ಭೋಗಗಳನ್ನು ಭೋಗಿಸುತ್ತಾ ಮೋಕ್ಷವು ಲಭಿಸಬೇಕೆನ್ನುವ ಉದ್ದೇಶವನ್ನಿಟ್ಟು ಈಶ್ವರನು ಧರ್ಮ ಸಂಹಿತೆಯನ್ನು ನಿರ್ಮಿಸಿದ್ದಾನೆ. ಆದುದರಿಂದ ಭಗವದ್ಗೀತೆಯ ಮೂರನೆಯ ಅಧ್ಯಾಯವನ್ನು ಕರ್ಮಯೋಗ ಎನ್ನಲಾಗಿದೆ.ನಿಷ್ಕಾಮ ಭಾವನೆಯಿಂದ ಧರ್ಮಾಚರಣೆ ಮಾಡುವುದನ್ನೇ ಕರ್ಮಯೋಗ ಎನ್ನುತ್ತಾರೆ. ಸಕಾಮ ಭಕ್ತಿಯನ್ನು ಧರ್ಮವು ಅಪೇಕ್ಷಿಸುವುದಿಲ್ಲ. ಆದರೆ ಕಾಲಪ್ರವಾಹದಲ್ಲಿ ಮಾನವನಲ್ಲಿ ಧರ್ಮದ ಬಗೆಗಿನ ಈ ಮೂಲ ಧೋರಣೆ ನಾಶವಾಗುತ್ತಾ ಹೋಯಿತು. ಇದರಿಂದ ಅವನ ಧರ್ಮಾಚರಣೆಯಲ್ಲಿ ದಿನೇದಿನೇ ನ್ಯೂನತೆ ಉಂಟಾಗತೊಡಗಿತು ಮತ್ತು ಆಗಲೇ ವ್ರತಗಳು ನಿರ್ಮಾಣವಾದವು. (ಆಧಾರ: ಸನಾತನ ನಿರ್ಮಿತ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)
ವ್ರತದ ಮಹತ್ವ ಮತ್ತು ಲಾಭಗಳು
ನಮ್ಮ ಶಾಸ್ತ್ರವು ದೇಶಕಾಲ ಪರಿಸ್ಥಿತಿಗನುಗುಣವಾಗಿ ಆಚರಣೆಯನ್ನು ಹೇಳುತ್ತದೆ. ವೇದಗಳಲ್ಲಿ ಹೇಳಿರುವಂತಹ ಆಚರಣೆಯನ್ನು ಮಾಡುವುದು ಸಾಮಾನ್ಯ ಮನುಷ್ಯರಿಗೆ ಕಠಿಣವಾಗಿದೆ. ಆ ಕಠಿಣತೆಯನ್ನು ಸುಗಮಗೊಳಿಸಿ ಎಲ್ಲರೂ ಆಚರಣೆ ಮಾಡುವಂತಾಗಲಿ ಮತ್ತು ಎಲ್ಲರ ಉದ್ಧಾರವಾಗಲಿ ಎನ್ನುವ ಉದ್ದೇಶದಿಂದ ಪುರಾಣಗಳಲ್ಲಿ ಈ ವ್ರತವೈಕಲ್ಯಗಳನ್ನು ಹೇಳಲಾಗಿದೆ.ಅ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ : ಪೃಥ್ವಿಯು ಸೂರ್ಯನ ಸುತ್ತಲೂ ತಿರುಗುವುದರಿಂದ ಋತುಗಳು ಉಂಟಾಗುತ್ತವೆ. ಶರೀರ ಹಾಗೂ ಮನಸ್ಸುಗಳನ್ನು ಈ ಬದಲಾವಣೆಗಳೊಂದಿಗೆ ಹೊಂದಿಸಿಕೊಳ್ಳಲು ಅನುಕೂಲವಾಗಲೆಂದು ವ್ರತಗಳನ್ನು ಹೇಳಲಾಗಿದೆ. ರೋಗಗಳು ಒಂದು ವಿಧದಲ್ಲಿ ಪಾಪದ ಫಲವೇ ಆಗಿರುವುದರಿಂದ ಶಾರೀರಿಕ, ಮಾನಸಿಕ ಹಾಗೂ ಸೋಂಕು ರೋಗಗಳು ವ್ರತದಿಂದ ನಾಶವಾಗುತ್ತವೆ.
ಭೀಷ್ಮಾಚಾರ್ಯರು ಸ್ತ್ರೀಯೊಂದಿಗೆ ಯುದ್ಧ ಮಾಡಲಾರೆ ಎನ್ನುವ ವ್ರತವನ್ನು ಸ್ವೀಕರಿಸಿದ್ದರು. ಆದುದರಿಂದಲೇ ಅವರು ಪೂರ್ವ ಜನ್ಮದಲ್ಲಿ ಸ್ತ್ರೀಯಾಗಿದ್ದ ಶಿಖಂಡಿಯೊಂದಿಗೆ ಯುದ್ಧ ಮಾಡಲಿಲ್ಲ. ಆ ಯುದ್ಧದಲ್ಲಿ ಶಿಖಂಡಿಯ ಬಾಣಗಳಿಂದ ಭೀಷ್ಮಾಚಾರ್ಯರಿಗೆ ವೇದನೆಯಾಗದೆ ಆನಂದವೇ ಆಯಿತು.
ಆ.ತಪ್ಪುಗಳ ಪರಿಮಾರ್ಜನೆ: ವ್ರತ, ಉಪವಾಸ, ನಿಯಮ ಮತ್ತು ಶರೀರ ಶುದ್ಧಿಗಳಿಂದಾಗಿ ಎಲ್ಲ ವರ್ಣಗಳೂ ನಿಸ್ಸಂಶಯ ವಾಗಿಯೂ ಪಾತಕಗಳಿಂದ ಮುಕ್ತವಾಗುತ್ತವೆ.
ಇ.ವ್ರತಂ ಭಾಗ್ಯಮ್: ವ್ರತದಿಂದ ಭಾಗ್ಯೋದಯವಾಗುತ್ತದೆ. ಇದರಿಂದ ದುಃಖ ಮತ್ತು ಆಪತ್ತುಗಳು ನಾಶವಾಗಿ ಸಂಪತ್ತು, ಕೀರ್ತಿ, ಯಶಸ್ಸು ಮತ್ತು ಆಯುರಾರೋಗ್ಯಗಳು ಲಭಿಸುತ್ತವೆ.
ಈ.ವ್ರತಂ ಪುಣ್ಯಮ್: ವ್ರತದಿಂದ ಪುಣ್ಯವು ಲಭಿಸುತ್ತದೆ.
ಉ.ವ್ರತಂ ಯಜ್ಞಃ: ಯಜ್ಞಾತ್ ಭವತಿ ಪರ್ಜನ್ಯಃ ಎನ್ನುವ ವಚನವಿದೆ. ವ್ರತವು ಯಜ್ಞವಾಗಿರುವುದರಿಂದ, ಅದರಿಂದ ಪರ್ಜನ್ಯ (ಮಳೆ), ವಿಶ್ವಶಾಂತಿಯಂತಹ ಲಾಭಗಳು ಆಗುತ್ತವೆ. ಹೆಚ್ಚಾಗಿ ಯಜ್ಞಗಳನ್ನು ಮಾಡಿದರೆ ಅದರ ಫಲವಾಗಿ ಸ್ವರ್ಗಪ್ರಾಪ್ತಿಯಾಗುತ್ತದೆ ಮತ್ತು ಅದು ಮೃತ್ಯುವಿನ ನಂತರ ಲಭಿಸುತ್ತದೆ. ವ್ರತದ ಸಂದರ್ಭದಲ್ಲಿ ಹೀಗಾಗುವುದಿಲ್ಲ. ವ್ರತದ ಫಲವು ವ್ರತಕರ್ತನಿಗೆ ಈ ಜನ್ಮದಲ್ಲಿಯೇ ಪ್ರಾಪ್ತವಾಗುತ್ತದೆ. ವೈದಿಕ ಯಜ್ಞವು ಮೂರು ವರ್ಣದವರಿಗೆ ಮಾಡಲು ಆಗುತ್ತದೆ. ಆದರೆ ವ್ರತಗಳನ್ನು ಶೂದ್ರರು, ಕುಮಾರಿಯರು, ಮುತ್ತೈದೆಯರು, ವಿಧವೆಯರು, ವೇಶ್ಯೆಯರು ಎಲ್ಲರೂ ಆಚರಿಸಬಹುದಾಗಿದೆ.
ಊ.ವ್ರತಂ ತಪಃ: ವ್ರತವು ಒಂದು ವಿಧದ ತಪಸ್ಸೇ ಆಗಿದೆ ಎಂದು ಜಾಬಾಲೋಪನಿಷದ್ ದರ್ಶನದಲ್ಲಿ ಹೇಳಲಾಗಿದೆ. ವ್ರತದಿಂದ ತಪಸ್ಸಿನಿಂದ ಸಿಗುವಂತಹ ಎಲ್ಲ ಫಲಗಳೂ ಸಿಗುತ್ತವೆ.
ಋ.ಉಪಾಸನೆಗೆ ಪೂರಕ ಉಪವಾಸ: ಉಪವಾಸ ಶಬ್ದವು ‘ಉಪ’ ಎಂದರೆ ಹತ್ತಿರ ಮತ್ತು ‘ವಾಸ’ ಎಂದರೆ ವಾಸಿಸುವುದು ಎಂಬುದರಿಂದ ಉತ್ಪನ್ನವಾಗಿದೆ. ಯಾವುದಾದರೊಂದು ಪುಣ್ಯದಿನದಂದು ದೇವರ, ಗುರುಗಳ ಅಥವಾ ಸಂತರ ಸಾನಿಧ್ಯದಲ್ಲಿ ವಾಸಿಸುವುದನ್ನೇ ಉಪವಾಸ ಎನ್ನಲಾಗಿದೆ. ಉಪವಾಸದ ದಿನ ಸ್ವಲ್ಪ ಸಮಯವಾದರೂ ಧ್ಯಾನ-ಧಾರಣೆ, ಜಪ ಇತ್ಯಾದಿ ಮಾಡುವುದು ಅಗತ್ಯವಾಗಿರುತ್ತದೆ. ಶಾಸ್ತ್ರೋಕ್ತವಾದ ಉಪವಾಸದಿಂದ ದೇಹ ಶುದ್ಧಿಯಾಗುತ್ತದೆ ಹಾಗೂ ಅಂತರ್ ಪ್ರವೃತ್ತಿಯು ಶಾಂತವಾಗಲು ಸಹಾಯವಾಗುತ್ತದೆ. ಉಪವಾಸದ ದಿನ ಆಲಸ್ಯ, ನಿದ್ರೆ, ಪಿತ್ತ ವಿಕಾರಾದಿಗಳು ಉಂಟಾಗದೇ ಉಪವಾಸವು ಒಳ್ಳೆಯ ರೀತಿಯಲ್ಲಿ ಆಗಲೆಂದು, ಆ ದಿನ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಲು ಹೇಳಲಾಗಿದೆ. ಐತರೇಯ ಬ್ರಾಹ್ಮಣದಲ್ಲಿ, ವ್ರತವನ್ನು ಅಂಗೀಕರಿಸದವರು ಅರ್ಪಿಸಿದ ಆಹುತಿಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಹೇಳಲಾಗಿದೆ.
ಎ.ವ್ರತಂ ದೇವೇಶಪೂಜನಂ: ವ್ರತವೆಂದರೆ ದೇವರ ಪೂಜೆಯೇ ಆಗಿದೆ. ಅದರಿಂದ ದೇವರು ಪ್ರಸನ್ನರಾಗುತ್ತಾರೆ.
ಏ.ಭಗವತ್ಪ್ರಾಪ್ತಿ: ವ್ರತದಿಂದ ಭಗವಂತನ ಪಾಪ್ತಿಯಾಗುತ್ತದೆ ಎಂದು ಕೂರ್ಮಪುರಾಣದಲ್ಲಿ ಹೇಳಲಾಗಿದೆ.
ಐ.ತ್ರಿದೋಷಗಳ ನಿವಾರಣೆ: ಪ್ರಾಣಿಮಾತ್ರರ ಅಂತಃಕರಣದಲ್ಲಿ ಮಲ, ವಿಕ್ಷೇಪ ಮತ್ತು ಆವರಣ ಎನ್ನುವ ಮೂರು ದೋಷಗಳಿವೆ. ಶಾಸ್ತ್ರದ ಪ್ರಕಾರ ಈ ಮೂರು ದೋಷಗಳು ನಿತ್ಯನೈಮಿತ್ತಿಕ ವ್ರತಾಚರಣೆ ಮಾಡುವುದರಿಂದ ನಾಶವಾಗುತ್ತವೆ.
೧.ಶಾಸ್ತ್ರವು ನಿಷೇಧಿಸಿರುವ ಅಭಕ್ಷ್ಯ ಭಕ್ಷಣ, ಅಪೇಯಪಾನ, ವ್ಯಭಿಚಾರ, ಪರ ದ್ರವ್ಯಾಪಹಾರ, ದುಷ್ಟಬುದ್ಧಿ, ಶಾಸ್ತ್ರವಿರುದ್ಧ ವರ್ತನೆ ಮುಂತಾದ ಅನೇಕ ನಿಷಿದ್ಧ ವಿಷಯಗಳ ಸೇವನೆಯಿಂದ ಉತ್ಪನ್ನವಾಗುವ ವಾಸನೆಯನ್ನು ಶಾಸ್ತ್ರಕಾರರು ಮಲದೋಷ ಎಂದು ಕರೆಯುತ್ತಾರೆ. ಆ ಮಲದೋಷವು ನಿತ್ಯ ನೈಮಿತ್ತಿಕ ವ್ರತಾಚರಣೆಯಿಂದ ನಾಶವಾಗುತ್ತದೆ ಮತ್ತು ಚಿತ್ತವು ಶುದ್ಧವಾಗಿ ಭಗವಂತನ ಮೇಲೆ ಪ್ರೀತಿ ಮೂಡುತ್ತದೆ.
೨.ಭಗವಂತನ ಮೇಲೆ ಸರ್ವೋತ್ಕೃಷ್ಟ ಪ್ರೀತಿ ಹುಟ್ಟಿದ ಮೇಲೆ ನಿತ್ಯ ನೈಮಿತ್ತಿಕ ವ್ರತಗಳ ಉಪಾಸನೆಯನ್ನು ಈಶ್ವರಾರ್ಪಣ ಬುದ್ಧಿಯಿಂದ ಮಾಡಿದಾಗ ಅಂತಃಕರಣದಲ್ಲಿನ ವಿಕ್ಷೇಪ ದೋಷವು ನಾಶವಾಗುತ್ತವೆ.
೩.ವಿಕ್ಷೇಪದೋಷವು ನಾಶವಾದ ಮೇಲೆ ಆ ಜಾಗದಲ್ಲಿ ಶಮದಮಾದಿ ನಿಗ್ರಹವು ಉತ್ಪನ್ನವಾಗುತ್ತದೆ. ಅನಂತರ ಗುರು ಮತ್ತು ವೇದವಾಕ್ಯದಲ್ಲಿ ಶ್ರದ್ಧೆ ಮೂಡಿ ಬುದ್ಧಿಯ ಮೇಲಿನ ಆವರಣವು ನಾಶವಾಗುತ್ತದೆ. ಅನಂತರ ಜ್ಞಾನಪ್ರಾಪ್ತಿಯಾಗಿ ಅವನು ಮೋಕ್ಷವನ್ನು ಪಡೆಯುತ್ತಾನೆ.
ಒ.ಕಡಿಮೆ ಶ್ರಮದಲ್ಲಿ ಹೆಚ್ಚಿನ ಲಾಭ: ಗುರುವಿಲ್ಲದವರಿಗೆ ಕನಿಷ್ಠ ಶ್ರಮ, ಕನಿಷ್ಠ ಖರ್ಚು ಇತ್ಯಾದಿಗಳನ್ನು ಮಾಡಿಯೂ ವ್ರತಪಾಲನೆಯಿಂದ ಅಧಿಕಾಧಿಕ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಲಾಭವಾಗುತ್ತದೆ.
ಓ.ಸಾಮಾಜಿಕ ಐಕ್ಯ: ವ್ರತವೈಕಲ್ಯಗಳು ಹಿಂದೂ ಕುಟುಂಬಗಳಲ್ಲಿ ಮತ್ತು ಸಮಾಜದಲ್ಲಿ ಐಕ್ಯವನ್ನು ಮೂಡಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿಭಾಯಿಸಿವೆ. ಉದಾಹರಣೆಗೆ, ಆಷಾಢ ಏಕಾದಶಿಯ ಪಂಢರಪುರದ ಪಾದಯಾತ್ರೆ.
No comments:
Post a Comment